Untitled

ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ
ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||

ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ
ಘಲಿರು ಘಲಿರೆಂಬ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ
ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||೧||

ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ
ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ
ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ
ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||೨||

ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ
ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ
ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ
ಬಟ್ಟಲೊಳುಣವಿಸೆ ನಗುವಾತನೆ ತೋಳನ್ನಾಡೈ ||೩||

ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ
ಅರ್ಜುನರಥಕೆ ಸಾರಥ್ಯ ಮಾಡಿದ ತೋಳನ್ನಾಡೈ
ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ
ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ||೪||

ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ
ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ
ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ
ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||೫||

Rate this poem: 

Reviews

No reviews yet.